ಭಟ್ಕಳ, ನವೆಂಬರ್ 4: ಜಾಲಿ ಪಂಚಾಯತ ವ್ಯಾಪ್ತಿಯ ತ್ಯಾಜ್ಯಗಳನ್ನು ತುಂಬಿಕೊಂಡು ಬೇಕಾ ಬಿಟ್ಟಿಯಾಗಿ ವಿಲೇವಾರಿ ಮಾಡುತ್ತಿದ್ದ ಆರೋಪದ ಮೇರೆಗೆ ಅರಣ್ಯಾಧಿಕಾರಿಗಳು ವ್ಯಕ್ತಿಯೋರ್ವನನ್ನು ವಾಹನ (ಸ್ವರಾಜ್ ಮಜ್ದಾ- ಕೆಎ೩೦ ಜಿ ೧೧೨) ಸಮೇತ ಬಂಧಿಸಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಬಂಧಿತ ಆರೋಪಿಯನ್ನು ಶನಿಯಾರ ಈರಪ್ಪ ನಾಯ್ಕ, ಸರ್ಪನಕಟ್ಟೆ (36) ಎಂದು ಗುರುತಿಸಲಾಗಿದೆ. ಈತನು ಜಾಲಿ ವ್ಯಾಪ್ತಿಯ ತ್ಯಾಜ್ಯಗಳನ್ನು ವಾಹನದಲ್ಲಿ ತುಂಬಿಕೊಂಡು ಬೆಳಲಖಂಡ ಅರಣ್ಯ ಭಾಗದಲ್ಲಿ ಬೇಕಾಬಿಟ್ಟಿಯಾಗಿ ಚೆಲ್ಲುತ್ತಿದ್ದನು ಎಂದು ಆರೋಪಿಸಲಾಗಿದ್ದು, ಎಸಿಎಫ್ ತಾಂಡೇಲ ಹಾಗೂ ಆರ್‌ಎಫ್‌ಓ ಎಮ್.ಜಿ.ನಾಯ್ಕ ಮಾರ್ಗದರ್ಶದಲ್ಲಿ ಈತನ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ ೧೯೬೩ ಸೆಕ್ಷನ್ ೨೪ ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ ೧೯೮೦ ಸೆಕ್ಷನ್ ೨ರನ್ವಯ ಪ್ರಕರಣ ದಾಖಲಿಸಿಕೊಂಡಿರುವ ಶಾಖಾ ವನಪಾಲಕ ಪಿ.ಎಸ್.ನಾಯ್ಕ ತನಿಖೆಯನ್ನು ಮುಂದುವರೆಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.